Wednesday 13 May, 2009

ಅಮ್ಮ , माँ , అమ్మ, Mother , அம்மா, അമ്മ

ಮೇ ೧೦, ತಾಯಂದಿರ ದಿನ (Mother's Day)

ಭಾನುವಾರ ಎಂದಿನ ಹಾಗೆ ಆರಾಮಾಗಿ ಎದ್ದು ನ್ಯೂಸ್ಪೇಪರ್ ಓದುತ್ತಿದ್ದೆ! ಮುಖ್ಯ ಪುಟಗಳನ್ನು ಮುಗಿಸಿ, ಭಾನುವಾರದ ಸಾಪ್ತಾಹಿಕ ಪುಟ ನೋಡುವಾಗ.. ತಕ್ಷಣ ಕಂಡಿತು "ಅಮ್ಮ"ನ ಬಗೆಗಿನ ಹಲವಾರು ಸುದ್ದಿ, ಕಥೆ, ಕವನಗಳು. ಆಗ ನೆನಪಿಗೆ ಬಂತು ಅಂದು "ತಾಯಂದಿರ ದಿನ" ಎಂಬುದು.


ಪ್ರೀತಿಯ ಆಗರ, ಮಮತಾ ಮೂರ್ತಿ, ತಾಯಿಯ ಜನ್ಮ ದಿನಾಂಕ ನಮ್ಮಲ್ಲಿ ಎಷ್ಟು ಮಂದಿಗೆ ಗೊತ್ತು..!!! ಹಲವಾರು ಕವಿಗಳು ಹೇಳುವ ಹಾಗೆ, ಕಣ್ಣಿಗೆ ಕಾಣುವ ದೇವರು ಎಂದರೆ ನಮಗೆ ಜನ್ಮ ಕೊಟ್ಟ ತಾಯಿ :) ಆ ಕರುಣಾಮಯಿಗೆ ನಾವು ಏನು ಕೊಟ್ಟರು ಋಣ ತೀರದು!!!


ನನ್ನ ಮನಸ್ಯಾಕೋ ಸರಿ ಸುಮಾರು ದಿನಗಳಿಂದ ತಾಯಿಯ ಬಗ್ಗೆ ಒಂದು ಕವನ ಬರಿ ಎಂದು ಹೇಳುತ್ತಿತ್ತು. ಅದಕ್ಕೆ ಕೊಟ್ಟ ಮೂರ್ತರೂಪ ಈ ನನ್ನ ಕವನ. ಇದು ಖಂಡಿತ ನನ್ನ ತಾಯಿಯ ಮಡಿಲಿಗೆ ನಾ ಸಮರ್ಪಿಸುತ್ತಿರುವ ಪುಟ್ಟ ಕಾಣಿಕೆ :)

ತಾಯಿಯ ಆ ರೂಪ

ಮಮತೆಯ ಪ್ರತಿರೂಪ

ಅವಳ ಜನ್ಮವು ಅಪರೂಪ

ಮನಸದು ರಾತ್ರಿಯ ಕೈದೀಪ... ಪ

ರುಧಿರ ಖಂಡಕ್ಕೆ ರೂಪವ ಕೊಡುವ ಅಮರ ಶಿಲ್ಪಿಯವಳು
ಮಾಂಸದ ಮುದ್ದೆಗೆ ಜೀವ ನೀಡುವ ಬ್ರಹ್ಮನ ತದ್ರೂಪಿಯವಳು
ನವಮಾಸಗಳು ಹೊತ್ತು ಹೆತ್ತು ಜನ್ಮವ ಕೊಟ್ಟವಳು
ತನ್ನಯ ಜೀವವನೆ ತೇಯ್ದು ನಮಗೆ ಪ್ರಾಣವ ನೀಡಿದಳು...೧

ತನ್ನ ದೇಹದ ಸಾರವನೆಲ್ಲ ಹಾಲಾಗಿ ಉಣಿಸಿದಳು
ಕರುಣೆ ಪ್ರೀತಿಯೆಂಬ ಊಟವ ಹಾಕಿ ನಮ್ಮನು ಬೆಳೆಸಿದಳು
ತಾನು ಕರಗುತ್ತ ಬೆಳಕ ನೀಡುವ ಅಮೃತ ಮೂರ್ತಿಯವಳು
ಆದ್ದರಿಂದಲೇ "ಅಮ್ಮ" ಎಂದೆಂದು ಬತ್ತದಂತ ಸ್ಪೂರ್ತಿ ಚಿಲುಮೆಯಾದಳು ...೨

ಅಪರೂಪ ಮಾಣಿಕ್ಯ
ಬಾಳಿನ ಸೌಭಾಗ್ಯ
ಅಮ್ಮ ನೆಂದು ಮರೆಯದಿರು
ಕಣ್ಣಿಗೆ ರೆಪ್ಪೆ ಯಂತೆ ಕಾಪಾಡುತಿರು ....೩